ಶೋಕ ಸಂದೇಶ

ಡಾ: ಜಿ.ಎಸ್. ಶಿವರುದ್ರಪ್ಪ 87 ವರ್ಷ ಇವರು ಇಂದು ಮದ್ಯಾಹ್ನ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಯಿತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚುರ್ಚಿಗುಂಡಿಯಲ್ಲಿ 1926 ರಲ್ಲಿ ಜನಿಸಿದ್ದ ಶ್ರೀಯುತರು ಕವಿಗಳು, ಬರಹಗಾರರು ಮತ್ತು ಸಂಶೋಧಕರಾಗಿ ಜನಪ್ರಿಯವಾಗಿದ್ದರು. ಹಲವಾರು ಕವಿತೆ, ಕಾವ್ಯ, ಕಾದಂಬರಿ, ಸಂಶೋದನಾ ಗ್ರಂಥಗಳನ್ನು ರಚಿಸಿದ್ದ ಇವರ ಕನ್ನಡ ಸಾಹಿತ್ಯಕ್ಕಾಗಿ 2006 ರಲ್ಲಿ ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇವರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ದಯಪಾಲಿಸಿ ಗೌರವಿಸಲಾಗಿತ್ತು. 1984 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1998 ರಲ್ಲಿ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಬೆಂಗಳೂರು ವಿಶ್ವ ವಿದ್ಯಾಲಯ ಮತ್ತು ಕುವೆಂಪು ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ, ಸೋವಿಯತ್ ಲ್ಯಾಂಡ್ ನೆಹರೂ ಅವಾರ್ಡ್‌ಗಳನ್ನು ಗಳಿಸಿದ್ದ ಇವರು 1992 ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕುವೆಂಪುರವರ ನೆಚ್ಚಿನ ಶಿಷ್ಯರಾಗಿದ್ದ ಇವರು ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿ ಸೌಂದರ್ಯ ಸಮೀಕ್ಷೆ ಎಂಬ ಗ್ರಂಥಕ್ಕೆ ಪಿ.ಹೆಚ್.ಡಿ. ಪದವಿ ದೊರಕಿತ್ತು.

ಮೃತರ ಅಗಲಿಕೆಯು ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದಂತಹ ನಷ್ಟ ಉಂಟು ಮಾಡಿದ್ದು, ಶಿವಮೊಗ್ಗದ ಮತ್ತೊಂದು ಕನ್ನಡ ಕವಿಯನ್ನು ಕಳಚಿಕೊಂಡಿದೆ.

ಕುಟುಂಬ ವರ್ಗದವರನ್ನು ಅಪಾರ ಕನ್ನಡ ಅಭಿಮಾನಿಗಳನ್ನು ಅಗಲಿರುವ ಶ್ರೀಯುತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಸರ್ವರಿಗೂ ದಯಪಾಲಿಸಲೆಂದು ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ,
(ಬಿ.ವೈ. ರಾಘವೇಂದ್ರ)Leave a Reply